ಪೀಡಕ ಪ್ರಭುತ್ವ -
ಕ್ರೂರವೂ ದಮನಕಾರಿಯೂ ನಿರಂಕುಶವೂ ಆದ ಸಂವೈಧಾನಿಕ ಕಾನೂನಿನ ಬೆಂಬಲವಿಲ್ಲದ ಆಳ್ವಿಕೆ (ಟಿರನಿ). ಗ್ರೀಸಿನ ಪ್ರಾಚೀನ ನಗರ ರಾಜ್ಯಗಳಲ್ಲಿ ಜನವರ್ಗಕ್ಕೂ ಶ್ರೀಮಂತ ಅಥವಾ ಕುಲೀನವರ್ಗಕ್ಕೂ ನಡುವಣ ಘರ್ಷಣೆಯಲ್ಲಿ ಸಾಮಾನ್ಯವಾಗಿ ಪೀಡಕ ಪ್ರಭುಗಳು ಅಧಿಕಾರಕ್ಕೆ ಬರುತ್ತಿದ್ದರು. ಗ್ರೀಕ್ ಪೀಡಕ ಪ್ರಭುಗಳಲ್ಲಿ ಪ್ರಸಿದ್ಧರಾದವರು ಕಾರಿಂತಿನ ಪೆರಿಯಾಂಡರ್, ಪಿಸಿಸ್ಟ್ರಾಟಸ್, ಹಿಪಾರ್ಕಸ್, ಆತೆನ್ಸಿನ ಹಿಪಿಯಾಸ್, ಗೆಲಾನ್, 1 ನೆಯ ಮತ್ತು 2 ನೆಯ ಹೈಯರೋ, ಡಯೋನೀಸಿಯಸ್ (ಹಿರಿಯ ಮತ್ತು ಕಿರಿಯ) ಅನುವಂಶೀಯ ರಾಜರಂತಲ್ಲದ ಈ ನಿರಂಕುಶ ಪ್ರಭುಗಳು ಸ್ವಪ್ರಯತ್ನದಿಂದ ಅಧಿಕಾರಕ್ಕೆ ಬಂದು, ಪೂರ್ವನಿದರ್ಶನದ ಆಧಾರವುಳ್ಳ ಸಂವಿಧಾನಗಳಿಗೆ ಹೆಚ್ಚಿನ ಮಹತ್ವ ನೀಡದೆ ಆಳಿದರು. ಇವರಲ್ಲಿ ಕೆಲವರು ಸಮರ್ಥರೂ ಜನಪ್ರಿಯರೂ ಆಗಿದ್ದರು. ಗ್ರೀಕ್ ಪ್ರಜಾಪ್ರಭುತ್ವದ ಉದಯದಿಂದಾಗಿ ಏಕವ್ಯಕ್ತಿಯ ಆಳ್ವಿಕೆ ತನ್ನ ಮಹತ್ವವನ್ನು ಕಳೆದಿಕೊಂಡಿತು. ಪೀಡಕ ಪ್ರಭುತ್ವ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳತೊಡಗಿತು. ಕ್ರಿ. ಪೂ. 4 ನೆಯ ಶತಮಾನದ ವೇಳೆಗೆ ಪೀಡಕ ಪ್ರಭುತ್ವದ ಬಗ್ಗೆ ಆಳವಾದ ದ್ವೇಷ ಬೇರೂರಿತು. ಪ್ಲೇಟೋ ವಿವೇಕಿಯಾದ ದೊರೆಗೆ ಪ್ರಥಮ ಸ್ಥಾನವನ್ನು ನಿರಂಕುಶನಾದ ಪ್ರಭುವಿಗೆ ಕೊನೆಯ ಸ್ಥಾನವನ್ನೂ ನೀಡಿದ್ದ. 

ಈ ವ್ಯತ್ಯಾಸ ಮಧ್ಯ ಯುಗದ ರಾಜಕೀಯ ತತ್ವಶಾಸ್ತ್ರದ ಮುಖ್ಯ ಗುರಿಯಾಯಿತು. ರಾಜ ಪ್ರಭುತ್ವವೇ ಪ್ರಧಾನ ಸರ್ಕಾರ ಪದ್ಧತಿಯಾಗಿದ್ದರೂ ಮಧ್ಯ ಯುಗದ ದೊರೆಗಳು ಸಂವಿಧಾನಕ್ಕೆ ಅನುಗುಣವಾಗಿ ಆಳುತ್ತಿದ್ದರೇ ಹೊರತು ನಿರಂಕುಶ ಪ್ರಭುಗಳಾಗಿರಲಿಲ್ಲ.  ಈ ದೊರೆಗಳ ಅಧಿಕಾರಿಗಳ ಮೇಲೆ ನಿರ್ದಿಷ್ಟ ರಾಜ್ಯಗಳ ವಸಾಹತು ಕಾನೂನು, ಸಾಂಪ್ರದಾಯಿಕ ಕಾನೂನು ಹಾಗೂ ದೈವಿಕ ಮತ್ತು ನೈಸರ್ಗಿಕ ಕಾನೂನು ಇರುತ್ತಿದ್ದುವು. ಇಲ್ಲವೇ ಇಡೀ ಮಾನವ ವರ್ಗದ ಆಳ್ವಿಕೆಗಾಗಿ ದೇವರಿಂದ ಬಂದವೆಂದು ಭಾವಿಸಲಾದ ನಿಯಮಗಳ ನಿಯಂತ್ರಣವಿತ್ತು. ದೊರೆಯ ಅಧಿಕಾರ ದೇವರಿಂದ ಬಂದದ್ದು ಎಂದು ಬಹುತೇಕ ಎಲ್ಲರೂ ಒಪ್ಪಿದ್ದರಾದರೂ ಪೀಡಕನ ಅಧಿಕಾರದ ಬಗ್ಗೆ ಅಷ್ಟು ಸ್ಪಷ್ಟವಾದ ಪರಿಕಲ್ಪನೆಯಿರಲಿಲ್ಲ. ಜನರನ್ನು ಶಿಕ್ಷಿಸಲು ದೇವರೇ ಪೀಡಕರನ್ನು ಕಳುಹಿಸುತ್ತಿದ್ದ ಎಂದು ಕೆಲವು ದೇವತಾ ಶಾಸ್ತ್ರಜ್ಞರು ನಂಬಿದ್ದರು. 

16-17 ನೆಯ ಶತಮಾನಗಳಲ್ಲಿ ನಿರಂಕುಶ ಪ್ರಭುತ್ವದ ಉದಯದೊಂದಿಗೆ ಪೀಡಕ ರಾಜನನ್ನು ಕುರಿತ ಮಧ್ಯಯುಗೀಯ ಸಿದ್ಧಾಂತ ವಿಮರ್ಶೆಗೆ ಒಳಗಾಯಿತು ; ಸಂವೈಧಾನಿಕ ಸಿದ್ಧಾಂತದ ಪ್ರತಿಪಾದಕರ ಪ್ರಭಾವಕ್ಕೆ ಒಳಗಾಯಿತು. ಇಂಗ್ಲೆಂಡಿನಲ್ಲಿ 1 ನೆಯ ಚಾಲ್ರ್ಸ್ ದೊರೆ (1625-1649) ರಾಜ್ಯ ಶಾಸನವನ್ನು ಪದೇ ಪದೇ ಉಲ್ಲಂಘಿಸುತ್ತ ಪೀಡಕ ಪ್ರಭುವಾದಾಗ ಅವನನ್ನು ಕಾನೂನಿನ ಕಕ್ಷೆಗೆ ಒಳಪಡಿಸಿ ಅವನಿಗೆ ಮರಣ ದಂಡನೆ ವಿಧಿಸಲಾಯಿತು. ಇದೇ ರೀತಿ ಮೂರನೆಯ ಜಾರ್ಜ್‍ನ ಪೀಡಕ ಕ್ರಮಗಳಿಂದಾಗಿ ಅಮೆರಿಕದಲ್ಲಿ ಕ್ರಾಂತಿಯುಂಟಾಗಿ ಅದು ಸ್ವಾತಂತ್ರ್ಯ ಘೋಷಿಸಿಕೊಂಡಿತು. (17 6) ಆಧುನಿಕ ಯುಗದಲ್ಲಿ ಸಂವಿಧಾನಬದ್ಧ ಸರ್ಕಾರ ಪದ್ಧತಿ ವಿಶೇಷ ಮಹತ್ವ ಗಳಿಸಿದೆ.								    (ಎಂ.ಎನ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ